Those who want to change constitution, the people will Teach them a lesson : Sharan Prakash Patil attacks Hate Minister Ananth Kumar Hegde on Republic Day.

ಸಂವಿಧಾನ ತಿರುಚುವವರಿಗೆ ಜನರಿಂದಲೇ ಪಾಠ
*******************************************
ಕಲಬುರಗಿ,ಜ.26.(ಕ.ವಾ.)-ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಿದ್ದು, ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಸಂವಿಧಾನ ಬದಲಾವಣೆ ಮಾಡುವ ಶಕ್ತಿ ಯಾರ ಬಳಿಯೂ ಇಲ್ಲ. ಸಂವಿಧಾನ ತಿರುಚಲು ಪ್ರಯತ್ನ ಪಟ್ಟರೆ ಅಂತಹವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಶುಕ್ರವಾರ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಹಾಗೂ ವಿವಿಧ ಪಡೆಗಳಿಂದ ವಂದನೆ ಸ್ವೀಕರಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಪ್ರಜಾಪ್ರಭುತ್ವದ ತಳಹದಿ ಮೇಲೆ ಎಲ್ಲರನ್ನು ಸಮೃದ್ಧಿಯತ್ತ ಕೊಂಡುಯ್ಯುವ ಕಾರ್ಯವಾಗುತ್ತಿದ್ದು, ಆಗಸ್ಟ್ 15ನೇ ಸ್ವಾತಂತ್ರ್ಯ ದಿನ ಹಾಗೂ ಜನೆವರಿ 26 ಗಣರಾಜ್ಯ ದಿನ ಇವೆರಡು ದಿನಗಳು ದೇಶದ ಹಬ್ಬವಾಗಿವೆ. ಮಹಾತ್ಮ ಗಾಂಧೀಜಿ, ಸುಭಾಷ್‍ಚಂದ್ರ ಬೋಸ್, ಜವಾಹರಲಾಲ್ ನೆಹರು, ಭಗತ್ ಸಿಂಗ್ ಹೀಗೆ ಅಸಂಖ್ಯಾತ ಹೋರಾಟಗಾರಿಂದ ದೇಶವು 1947ರಲ್ಲಿ ಬ್ರಿಟಿಷರಿಂದ ಮುಕ್ತಿಗೊಂಡಿತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ರ ನಾವು ಯಾವತ್ತು
ಮರೆಯುವಂತಿಲ್ಲ. ಜಗತ್ತು ಕಂಡಿರುವ ಅದ್ಭುತ ಮೇದಾವಿ ಹಾಗೂ ಸಂಶೋಧಕರಾಗಿದ್ದರು. ಎಲ್ಲ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಿದ ಭಾರತದ ಸಂವಿಧಾನವನ್ನು ಜನೆವರಿ 26, 1950ರಂದು ಜಾರಿಗೆ ತರಲಾಯಿತು. ಬಹುಶಃ ಅಂಬೇಡ್ಕರರು ಓದಿದ ಗ್ರಂಥವೇ ಇಲ್ಲವೇನೊ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
70 ವರ್ಷಗಳಲ್ಲಿ ಎಲ್ಲದಕ್ಕೂ ಸರಿಯಾದ ದಿಕ್ಕು ದೆಸೆ ಸಂವಿಧಾನ ನೀಡಿದೆ. ಪ್ರಜಾಪ್ರಭುತ್ವ ಗಟ್ಟಿಯಾಗುವುದಕ್ಕೆ ಸಂವಿಧಾನದ ಸದಾಶಯವೇ ಕಾರಣವಾಗಿದೆ. ದೇಶವನ್ನು ಸುಸೂತ್ರ ಹಾಗೂ ಅಭಿವೃದ್ಧಿ ದಾರಿಯಲ್ಲಿ ಕೊಂಡೊಯ್ಯಲು ಆಡಳಿತ ಕೊರತೆ ಇರಬಹುದೇ ವಿನಃ ಸಂವಿಧಾನ ಅಲ್ಲ. ಇಂದು ಸಂವಿಧಾನದಿಂದಲೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಧ್ವನಿ ಇಲ್ಲದವರಿಗೆ ಅವಕಾಶ ಕಲ್ಪಿಸುವುದೇ ರಾಷ್ಟ್ರಪ್ರೇಮ. ಸ್ವಹಿತಾಸಕ್ತಿ ಮಾಡಿದರೆ ದೇಶ ಕಟ್ಟಲು ಸಾಧ್ಯವಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ಕುವರೆ ವರ್ಷದಲ್ಲಿ ಜನಪರ ಆಡಳಿತ ನೀಡಿದ್ದಾರೆ. ರೈತರ 8 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. 34 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. 371(ಜೆ) ಕಲಂ ಹೈದ್ರಾಬಾದ್ ಕರ್ನಾಟಕದ ಜನರಿಗೆ ಸಹಾಯಕವಾಗಿದ್ದು, ಹೈ.ಕ.ಅ.ಮಂಡಳಿ ಸ್ಥಾಪಿಸಿ ನಾಲ್ಕುವರೆ ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದರು.
ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್.ಪಿ.ಐ. ಚೆನ್ನಬಸವ ಅವರ ನೇತೃತ್ವದಲ್ಲಿ ನಡೆದ ಪರೇಡಿನಲ್ಲಿ ಡಿ.ಎ.ಆರ್., ಕೆ.ಎಸ್.ಆರ್.ಪಿ., ಸಿವಿಲ್ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ಕಾರ್ಯಪಡೆ, ಅಬಕಾರಿ ಇಲಾಖೆ, ಎನ್.ಸಿ.ಸಿ. ಬಾಲಕರು, ತಾರಫೈಲ್ ಸರ್ಕಾರಿ ಪ್ರೌಢಶಾಲೆ, ಸ್ಕೌಟ್ಸ್ ಬಾಲಕರು, ಭಾರತ ಸೇವಾ ದಳದ ಬಾಲಕಿಯರು, ಜವಾಹರ ನವೋದಯ ಶಾಲೆ, ಗೈಡ್ಸ್ ಬಾಲಕಿಯರು, ಕೆ.ಸಿ.ಇ.ಡಿ.ಟಿ.ಬಾಲಕಿಯರ ಪ್ರೌಢಶಾಲೆ ರೆಡ್‍ಕ್ರಾಸ್ ಶಾಖೆ, ಸರ್ಕಾರಿ ಅಂಧ ಬಾಲಕರ ವಸತಿ ಶಾಲೆ ಸೇರಿದಂತೆ ಒಟ್ಟು 15 ತುಕಡಿಗಳಿಂದ ಸಚಿವರು ಪರೇಡ್ ವಂದನೆ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಿವಲಿಂಗಪ್ಪಾ ಬಸಲಿಂಗಪ್ಪಾ ಪಾಟೀಲ, ಅಣ್ಣಾರಾವ ಬಸವಂತರಾವ ಪಾಟೀಲ ಗೌಡಗಾಂವ ಅವರನ್ನು ಸನ್ಮಾನಿಸಲಾಯಿತು. ಅಪಘಾತ ರಹಿತ ವಾಹನ ಚಾಲನೆ ಮಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1 ಹಾಗೂ 2ರ ಒಟ್ಟು 27 ಜನ ವಾಹನ ಚಾಲಕರಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
2017-18 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ 5 ಜನ ಕ್ರೀಡಾಪಟುಗಳಿಗೆ ಹಾಗೂ ಕರ್ನಾಟಕ ದೂರದೃಷ್ಟಿ (ವಿಜನ್) 2025ರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮು ಗೋಪಿಚಿನ್ನಿ ರಾಠೋಡ ಹಾಗೂ ಆನಂದ ಬಳುರಗಿ ಅವರನ್ನು ಜೀವ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿ ನಗರದ ವಿವಿಧ ಶಾಲೆಗಳ 1240 ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಜರುಗಿದ ಅತ್ಯಾಕರ್ಷಕ ಮತ್ತು ಮನಮೋಹಕ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದೇಶಭಕ್ತಿ ಮತ್ತು ತ್ಯಾಗ ಬಲಿದಾನಗಳ ವಿವಿಧ ರೋಮಾಂಚಕ ಸನ್ನಿವೇಶಗಳು ಪ್ರದರ್ಶಿತವಾದವು.
ಕಲಬುರಗಿಯ ವಿವಿಧ ಇಲಾಖೆಗಳಿಂದ ಸ್ತಬ್ದ ಚಿತ್ರಗಳ ಪ್ರದರ್ಶನ ಹಾಗೂ ಕಲಬುರಗಿ ಆಗ್ನಿಶಾಮಕ ದಳದ ಸಿಬ್ಬಂದಿಯಿಂದ ಏರ್ಪಡಿಸಲಾಗಿದ್ದ ವಿಷ ಅನಿಲ ಸೋರಿಕೆ ಹಾಗೂ ಮನೆಯಲ್ಲಿ ಅನಿಲ ಸೋರಿಕೆಯಿಂದ ಅನಾಹುತ ಸಂಭವಿಸಿದಾಗ ಹೇಗೆ ಮುಂಜಾಗೃತ ಕ್ರಮ ಕೈಗೊಳ್ಳಬೇಕೆಂಬ ಅಣುಕು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್, ಮಹಾನಗರಪಾಲಿಕೆ ಮಹಾಪೌರ ಶರಣುಕುಮಾರ ಮೋದಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಅಕೃತಿ ಸಾಗರ, ಕಲಬುರಗಿ ಸಹಾಯಕ ಆಯುಕ್ತೆ ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ ಸೇರಿದಂತೆ ಮತ್ತಿತರ ಅಧಿಕಾರಿ ಹಾಗೂ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Courtesy Gulbarga Varthe.

 

Comments
Facebooktwittergoogle_plusredditpinterestlinkedinmail

Leave a Reply

Facebook