Dr Babu Jagjivan Ram & Dr BR Ambedkar Jayanti will be celebrated in Huge

ಡಾ. ಜಗಜೀವನರಾಂ ಮತ್ತು ಡಾ. ಅಂಬೇಡ್ಕರ್
***********************************************
ಜಯಂತ್ಯೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
****************************************************************
ಕಲಬುರಗಿ,ಮಾ.25.(ಕ.ವಾ.)-ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯೋತ್ಸವಗಳನ್ನು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕ್ರಮವಾಗಿ 2017ರ ಏಪ್ರಿಲ್ 5 ಮತ್ತು 14ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕಲಬುರಗಿಯಲ್ಲಿ ಜರುಗಿದ ಜಯಂತ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಡಾ. ಬಾಬು ಜಗಜೀವನರಾಂ ಜಯಂತ್ಯೋತ್ಸವದ ಅಂಗವಾಗಿ ಏಪ್ರಿಲ್ 5 ರಂದು ಬೆಳಿಗ್ಗೆ 9 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಬಾಬು ಜಗಜೀವನರಾಂ ಭಾವಚಿತ್ರದ ಮೆರವಣಿಗೆಯನ್ನು ಆಯೋಜಿಸಲಾಗುವುದು. ಮೆರವಣಿಗೆ ನಡೆಯುವ ಮಾರ್ಗದಲ್ಲಿ ನೀರು ಸಿಂಪಡಿಸುವ, ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಮತ್ತು ಪೂರ್ಣ ಕುಂಭ ಕಲಶದ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಯಿತು. ನಂತರ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಯಂತ್ಯೋತ್ಸವದ ಮುಖ್ಯ ಸಮಾರಂಭ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅದೇರೀತಿ ಏಪ್ರಿಲ್ 14 ರಂದು ಬೆಳಿಗ್ಗೆ ಜಗತ್ ವೃತ್ತದ ಬಳಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯ ಬಳಿ ಜಯಂತ್ಯೋತ್ಸವದ ಅಂಗವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅಂದು ಬೆಳಿಗ್ಗೆ 8 ಗಂಟೆಗೆ ಮಾಲಾರ್ಪಣೆ ಬಳಿಕ ಜಯಂತ್ಯೋತ್ಸವದ ಸಮಾರಂಭ ಜರುಗುವುದು.
ಈ ಎರಡೂ ಜಯಂತಿಗಳ ಆಚರಣೆಗೆ ಸಂಬಂಧಿಸಿದಂತೆ ರಚಿಸಲಾದ ಎಲ್ಲ ಉಪಸಮಿತಿಗಳಿಗೆ ವಹಿಸಲಾದ ಕೆಲಸ ಕಾರ್ಯಗಳನ್ನು ಚಾಚು ತಪ್ಪದೇ ಅತ್ಯಂತ ಜವಾಬ್ದಾರಿಯಿಂದ ಕೈಗೊಳ್ಳಬೇಕು. ಜಯಂತಿ ಆಚರಣೆಯ ಸಂದರ್ಭದಲ್ಲಿ ಕುಡಿಯುವ ನೀರು, ವಿದ್ಯುತ್ ಅಲಂಕಾರ, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಏಪ್ರಿಲ್ 5 ರಂದು ಬಾಬು ಜಗಜೀವನರಾಂ ಮತ್ತು ಏಪ್ರಿಲ್ 14ರಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಿ ಆಚರಣೆಯ ಮುಖ್ಯ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದರಲ್ಲದೆ ಈ ಕುರಿತು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ರಾಜಪ್ಪ, ಶಿಷ್ಟಾಚಾರ ತಹಸೀಲ್ದಾರ ಪ್ರಕಾಶ ಚಿಂಚೋಳಿಕರ, ದಲಿತ ಸಮಾಜದ ಹಲವಾರು ಮುಖಂಡರು ಈ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಹಾಜರಿದ್ದು ಡಾ. ಬಾಬು ಜಗಜೀವನರಾಂ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.

 

Comments
Facebooktwittergoogle_plusredditpinterestlinkedinmail

Leave a Reply

Facebook