6 Drinking water stalls in Gulbarga City

ಕಲಬುರಗಿ ನಗರದ 6 ಕಡೆ ಶುದ್ಧ ಕುಡಿಯುವ ನೀರಿನ ಘಟಕ

ಕಲಬುರಗಿ,ಏ.8-ಮಹಾನಗರ ಪಾಲಿಕೆ ವತಿಯಿಂದ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ನಗರದ 6 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸೈಯದ ಅಹ್ಮದ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಇಂದಿರಾ ಸ್ಮಾರಕ ಭವನದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರದ ಜನತೆಗೆ ಅತ್ಯಂತ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 6 ಸ್ಥಳಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರರಾಗಿ ಕಾರ್ಯನಿರ್ವಹಿಸಿದ ಈ ಒಂದು ವರ್ಷದ ಅವಧಿ ತೃಪ್ತಿ ತಂದಿದೆ ಎಂದು ತಿಳಿಸಿದ ಅವರು ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರಾದ ಪಿ. ಸುನೀಲಕುಮಾರ ಹಾಗೂ ಪಾಲಿಕೆ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಪರಿಶ್ರಮದಿಂದಾಗಿ ಹಿಂದೆಂದಿಗಿಂತಲೂ ಈ ಬಾರಿ ಗರಿಷ್ಠ ಮಟ್ಟದಲ್ಲಿ ಆಸ್ತಿಕರ ಸಂಗ್ರಹವಾಗಿದೆ ಎಂದು ತಿಳಿಸಿದರು.
@12bc = 4 ಕಡೆ ವಾಣಿಜ್ಯ ಸಂಕೀರ್ಣ
ಪಾಲಿಕೆ ಆದಾಯ ಹೆಚ್ಚಿಸುವ ಉದ್ದೇಶಿಂದ ನಗರದ ಗಾಜಿಪುರದ ಮಿಲನಚೌಕ್, ಹಳೆ ಜಿಲ್ಲಾಧಿಕಾರಿ ಕಚೇರಿ ಹಿಂದುಗಡೆ, ಸ್ಟೇಷನ್ ಬಜಾರದ ಸಿಟಿ ಬಸ್ ಸ್ಟ್ಯಾಂಡ್ ಒನವೇ ಮಾರ್ಗ ಹತ್ತಿರ ಮತ್ತು ಬ್ರಹ್ಮಪುರದ ಸರ್ವೆ ನಂ.70ರ ಚಿತ್ತಾರಿ ಅಡ್ಡ ಹತ್ತಿರ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅನುಮೋದನೆ ನೀಡಲಾಗಿದೆ. ಈ ವಾಣಿಜ್ಯ ಸಂಕೀರ್ಣಗಳ ಅಂಗಡಿಗಳನ್ನು ಸರ್ಕಾರದ ಆದೇಶದ ಪ್ರಕಾರ ಬಹಿರಂಗ ಹರಾಜು ಮಾಡಿ ಹಂಚಿಕೆ ಮಾಡಲಾಗುವದು. ಇದರಿಂದ ಪಾಲಿಕೆಗೆ ಸುಮಾರು 10 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.
@12bc = ಕುಡಿಯುವ ನೀರಿಗೆ ತೊಂದರೆ ಇಲ್ಲ
ಸದ್ಯ ನಗರಕ್ಕೆ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಮೇ.5 ರವರೆಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಅವರು ತಿಳಿಸಿದರು.
ನಗರದ ಶೋರ್ ಗುಂಬಜ್, ಕೋಟನೂರ (ಡಿ) ಮತ್ತು ಹಳೆ ಫಿಲ್ಟರ್ ಬೆಡ್ ಹತ್ತಿರವಿರುವ ಕುಡಿಯುವ ನೀರು ಪೂರೈಕೆ ಘಟಕಗಳನ್ನು 62 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದು, ನಗರದ ಜನತೆಗೆ ಈಗ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಯ ಪೈಪಲೈನ್ ನಲ್ಲಿ ಲಿಕೇಜ್ ನಿಂದಾಗಿ ಅಶುದ್ಧ ನೀರು ಪೂರೈಕೆಯಾಗುವ ಸಾಧ್ಯತೆಗಳಿದ್ದು, ಅಂತಹ ಪೈಪ್ ಲೈನ್ ಗಳನ್ನು ದುರಸ್ಥಿಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
24×7 ಕುಡಿಯುವ ನೀರು ಪೂರೈಕೆ ಯೋಜನೆ ಶೀಘ್ರವೇ ಪೂರ್ಣಗೊಳಿಸಲಾಗುವದು ಎಂದು ಅವರು ತಿಳಿಸಿದರು.
@12bc = 150 ಕೋಟಿ ಅನುದಾನ
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಹಾನಗರ ಪಾಲಿಕೆಗೆ 2014-15, 2015-16 ಮತ್ತು 2016-17ನೇ ಸಾಲಿನಲ್ಲಿ ಒಟ್ಟು 150 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಈ ಅನುದಾನದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಹಲವು ಕೆಲಸಗಳು ಪೂರ್ಣಗೊಂಡಿದ್ದು, ಕೆಲವು ಪ್ರಗತಿ ಹಂತದಲ್ಲಿವೆ, ಇನ್ನೂ ಕೆಲವು ಕಾಮಗಾರಿಗಳು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಆರ್.ಪಿ.ಜಾಧವ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook