ಬಿಜೆಪಿ ಹೆಚ್ಚು , ಕಾಂಗ್ರೆಸ್‌ ಕಡಿಮೆ ಅಂತರ!

ಗುಲ್ಬರ್ಗ: 1952 ರಿಂದ 2009ರ ವರೆಗೆ ನಡೆದ 17 ಲೋಕಸಭಾ ಚುನಾ­ವಣೆಗಳಲ್ಲಿ (2 ಉಪ ಚುನಾವಣೆ ಸೇರಿದಂತೆ) ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಒಂದು ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಒಂದು ಅವಧಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ­ಯೊಬ್ಬರು ಅತ್ಯಂತ ಕಡಿಮೆ ಅಂತರದಿಂದ ಜಯ ಗಳಿಸಿದ್ದಾರೆ.

1998ರಲ್ಲಿ ನಡೆದ ಚುನಾವಣೆ­ಯಲ್ಲಿ ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರು 3,28,982 ಮತಗಳನ್ನು ಪಡೆದು, ಜನತಾ ದಳದ ಖಮರುಲ್ ಇಸ್ಲಾಂ ಅವರನ್ನು 1,31,­798 ಮತಗಳ ಅಂತರದಿಂದ ಪರಾಭ­ವ­ಗೊಳಿಸುವ ಮೂಲಕ ಇದುವರೆಗೆ ನಡೆದ ಚುನಾವಣೆಗಳಲ್ಲಿ ಅತಿ ಹೆಚ್ಚು ಮತ­ಗಳಿಂದ ವಿಜೇತರಾದ ಅಭ್ಯರ್ಥಿ­ಯಾಗಿದ್ದಾರೆ. ಅಂತೆಯೇ, ಈವರೆಗಿನ ಚುನಾವಣೆ­ಗಳಲ್ಲಿ ಕಾಂಗ್ರೆಸ್ 15 ಬಾರಿ (ಉಪ ಚುನಾವಣೆ ಸೇರಿ), ಜನತಾದಳ ಹಾಗೂ ಬಿಜೆಪಿ ತಲಾ ಒಂದು ಅವಧಿಗೆ ಗೆಲುವು ಸಾಧಿಸಿವೆ.

1962ರಲ್ಲಿ ನಡೆದ ಚುನಾವಣೆ­ಯಲ್ಲಿ ಕಾಂಗ್ರೆಸ್‌ನ ಮಹಾದೇವಪ್ಪ ಯಶ­ವಂತಪ್ಪ ಅವರು ಕೇವಲ 8,073 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ­ಯಾಗಿದ್ದ ಶರಣಗೌಡ ಸಿದ್ದರಾಮಯ್ಯ ಅವರ ವಿರುದ್ಧ ಜಯ ಸಾಧಿಸಿದ್ದರು. ಇದನ್ನು ಹೊರತುಪಡಿ­ಸಿದರೆ ಎನ್.ಧರ್ಮಸಿಂಗ್ (1980)– 1,17,976 ಮತ, ಬಿ.ಜಿ.ಜವಳಿ (19­89)–1,08,838 ಮತಗಳ ಅಂತರ­ದಿಂದ ಗೆಲುವು ಸಾಧಿಸಿದ ಎರಡು ಹಾಗೂ ಮೂರನೇ ಅಭ್ಯರ್ಥಿ­ಗಳಾಗಿ­ದ್ದಾರೆ. ಇದುವರೆಗೆ ನಡೆದ ಎಲ್ಲ ಚುನಾ­ವಣೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿ­ಸಿದ ದಾಖಲೆ ಈ ಮೂವರ ಹೆಸರಲ್ಲಿದೆ.

ಸೇಡಂಗೆ ಮತ್ತೆ ಸೋಲು: 1998ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿಯ ಬಸವರಾಜ್ ಪಾಟೀಲ್ ಸೇಡಂ ಅವರು 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅಹಮ್ಮದ್ ಸರಡಗಿ ವಿರುದ್ಧ 69,837 ಮತಗಳ ಅಂತರದಿಂದ ಪರಾಭವಗೊಂಡರು. ಇದೇ ರೀತಿ 2004ರಲ್ಲಿ ಸರಡಗಿ ವಿರುದ್ಧವೇ 57,884 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಖರ್ಗೆ 2ನೇ ಕಡಿಮೆ ಅಂತರ: 2009ರಲ್ಲಿ ನಡೆದ 17ನೇ ಲೋಕ­ಸಭಾ ಚುನಾವಣೆಯಲ್ಲಿ ಗುಲ್ಬರ್ಗ ಮೀಸಲು ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು ಕಡಿಮೆ ಅಂತರದಿಂದ (13,404 ಮತ) ಗೆಲುವು ಸಾಧಿಸಿದ 2ನೇ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಖರ್ಗೆ ಅವರು 3,45,241 ಮತಗಳನ್ನು ಪಡೆದರೆ, ಬಿಜೆಪಿಯ ರೇವು ನಾಯಕ ಬೆಳಮಗಿ ಅವರು 3,31,837 ಮತಗಳನ್ನು ಪಡೆದಿದ್ದರು.

Courtesy Prajawaani

Comments
Facebooktwittergoogle_plusredditpinterestlinkedinmail

Leave a Reply

Facebook